ತುಮಕೂರು, ಸೆ 20 (DaijiworldNews/DB): ಚಿಕ್ಕನಾಯಕನಹಳ್ಳಿ ತಾಲೂಕು ಹುಳಿಯಾರು ಪೊಲೀಸ್ ಠಾಣೆಯ ಮಹಿಳಾ ಪೇದೆ ಸುಧಾರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಟ್ವಿಸ್ಟ್ ಸಿಕ್ಕಿದ್ದು, ಆಕೆಯ ಸಹದ್ಯೋಗಿಯೇ ಕೊಲೆಗೆ ಸುಪಾರಿ ನೀಡಿದ ಆರೋಪಿ ಎಂಬುದು ಬೆಳಕಿಗೆ ಬಂದಿದೆ. ಇಲ್ಲಿ ತ್ರಿಕೋನ ಪ್ರೇಮ ಪ್ರಕರಣವೂ ಬಯಲಾಗಿದೆ.
ಸುಧಾರ ಸಹದ್ಯೋಗಿಯಾಗಿರುವ ಪೇದೆ ರಾಣಿಯೇ ಸುಧಾ ಕೊಲೆಗೆ ಸುಪಾರಿ ನೀಡಿರುವುದಾಗಿ ತನಿಖೆ ವೇಳೆ ಬಯಲಾಗಿದೆ. ಸುಧಾ ಮತ್ತು ರಾಣಿ ಬೆಂಗಳೂರಿನಲ್ಲಿ ಒಂದೇ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇಬ್ಬರೂ ಒಬ್ಬ ಪೊಲೀಸ್ನನ್ನು ಪ್ರೀತಿಸುತ್ತಿದ್ದು, ಈ ವಿಚಾರವಾಗಿ ಸುಧಾ-ರಾಣಿ ನಡುವೆ ಗಲಾಟೆ ನಡೆದಿತ್ತು. ಕೊನೆಗೆ ಪ್ರಿಯಕರನನ್ನು ಪಡೆದುಕೊಳ್ಳಲು ರಾಣಿ ಸುಧಾಳನ್ನು ಮುಗಿಸುವ ಸಂಚು ರೂಪಿಸಿದ್ದಾಳೆ. ಅದರಂತೆ ಸುಪಾರಿ ನೀಡಿ ಆಕೆಯನ್ನು ಕೊಲೆ ಮಾಡಿದ್ದಾಳೆ ಎಂಬುದು ತನಿಖೆಯಿಂದ ತಿಳಿದು ಬಂದಿದೆ.
ಸೆ.13ರಂದು ಹುಳಿಯಾರು ಠಾಣೆಯ ಪೇದೆ ಎಸ್.ಸುಧಾ ಮತ್ತು ಆಕೆಯ ಚಿಕ್ಕಮ್ಮನ ಮಗ ಮಂಜುನಾಥ್ ಜೊತೆಯಾಗಿ ಕಾರಿನಲ್ಲಿ ಹೊರಟಿದ್ದರು. ಬಳಿಕ ರಾತ್ರಿ ಅವರಿಬ್ಬರ ಫೋನ್ ಸಂಪರ್ಕ ಕಡಿಗೊಂಡಿತ್ತು. ಬಳಿಕ ಸುಧಾ ನಾಪತ್ತೆಯಾಗಿರುವ ಬಗ್ಗೆ ಆಕೆ ಕೆಲಸ ಮಾಡುತ್ತಿದ್ದ ಪೊಲೀಸ್ ಠಾಣೆಯಲ್ಲಿಯೇ ದೂರು ದಾಖಲಾಗಿತ್ತು. ಸುಧಾರಿಗಾಗಿ ಹುಡುಕಾಟ ನಡೆಯುತ್ತಿದ್ದಾಗಲೇ ಸೆ.16ರಂದು ಶಿವಮೊಗ್ಗ ನಗರದ ಲಾಡ್ಜ್ವೊಂದರಲ್ಲಿ ಚಿಕ್ಕನಾಯಕನಹಳ್ಳಿ ತಾಲೂಕು ಹುಳಿಯಾರು ಹೋಬಳಿ ಕೆರೆಸೂರಗೊಂಡನಹಳ್ಳಿಯ ಮಂಜುನಾಥ್(26) ಶವವಾಗಿ ಪತ್ತೆಯಾಗಿದ್ದ. ಅಲ್ಲದೆ ಆತನ ಪಕ್ಕದಲ್ಲೇ ಡೆತ್ನೋಟ್ವೊಂದು ಸಿಕ್ಕಿದ್ದು, ಅದರಲ್ಲಿ ನನ್ನ ದೊಡ್ಡಮ್ಮನ ಮಗಳು ಸುಧಾಳನ್ನು ಬೀದಿ ಹೆಣವಾಗಿಸಿದ್ದೇನೆಂದು ಬರೆದಿದ್ದ. ಮರುದಿನ ಸುಧಾಳ ಮೃತದೇಹವು ಅರಸೀಕೆರೆ ತಾಲೂಕಿನ ತಿಪಟೂರು ಮತ್ತು ಅರಸೀಕೆರೆ ಎನ್ಎಚ್-206ರ ಮೈಲನಹಳ್ಳಿ ಬಳಿಯ ಪೊದೆಯಲ್ಲಿ ಸುಧಾ ಪತ್ತೆಯಾಗಿತ್ತು.
ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಮೊಬೈಲ್ ಕರೆಗಳನ್ನು ಪರಿಶೀಲನೆ ಮಾಡಿದಾಗ ಸುಧಾ ಸಹದ್ಯೋಗಿ ರಾಣಿಯೇ ಸುಪಾರಿ ಕಿಲ್ಲರ್ ಎಂಬುದು ಗೊತ್ತಾಗಿದೆ. ಪಿಎಫ್ ಹಣದ ವಿಚಾರದಲ್ಲಿ ಸುಧಾ ತನಗೆ ಅವಮಾನಿಸಿದ್ದಾಳೆ ಎಂದು ಸುಧಾಳ ಚಿಕ್ಕಮ್ಮನ ಮಗ ಮಂಜುನಾಥ್, ಮತ್ತು ಆತನ ಸ್ನೇಹಿತ, ಕಾರು ಚಾಲಕ ನಿಖೇಶ್ಲ್ಲಿ ದೂರಿದ್ದಾಳೆ. ಅಲ್ಲದೆ ಆಕೆಯನ್ನು ಕೊಲೆ ಮಾಡುವಂತೆ ಪ್ರೇರೇಪಿಸಿದ್ದಾಳೆ. ಇವರಿಬ್ಬರೂ ಸುಧಾ ಕೊಲೆಗೆ ಸೆ.4ರಂದೇ ಸ್ಕೆಚ್ ಹಾಕಿದ್ದರಾದರೂ, ಅದು ತಪ್ಪಿ ಹೋಗಿತ್ತು. ಬಳಿಕ ಉಪಾಯವಾಗಿ ಸೆ.13ರಂದು ಆಕೆಯನ್ನು ಕರೆದೊಯ್ದು ಸುಧಾ ಕಣ್ಣಿಗೆ ಸ್ಪ್ರೇ ಮಾಡಿ ಎದೆಭಾಗಕ್ಕೆ ಚಾಕುವಿನಿಂದ ಇರಿದಿದ್ದಾರೆ. ನಂತರ ವೇಲ್ನಿಂದ ಕುತ್ತಿಗೆಗೆ ಬಿಗಿದು ಕೊಲೆಗೈದು ಮಾರ್ಗಮಧ್ಯೆ ಎಸೆದು ಪರಾರಿಯಾಗಿದ್ದರು. ಬಳಿಕ ಅಕ್ಕನನ್ನು ಕೊಂದು ಮಂಜುನಾಥ್ ಶಿವಮೊಗ್ಗದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ. ವಿಚಾರಣೆ ವೇಳೆ ರಾಣಿ ಈ ಎಲ್ಲಾ ಅಂಶವನ್ನು ಬಾಯ್ಬಿಟ್ಟಿದ್ದಾಳೆ. ಆದರೆ ರಾಣಿ ಮತ್ತು ಸುಧಾ ಪೇದೆಯೊಬ್ಬನನ್ನು ಪ್ರೀತಿಸುತ್ತಿದ್ದು, ಅವನನ್ನು ಪಡೆಯಲೆಂದೇ ಸುಧಾಳನ್ನು ಮುಗಿಸುವ ಸಂಚು ರೂಪಿಸಿದ್ದಳು ಎಂಬುದೂ ವಿಚಾರಣೆ ವೇಳೆ ತಿಳಿದು ಬಂದಿದೆ ಎನ್ನಲಾಗಿದೆ. ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ರಾಣಿಯನ್ನು ಕರ್ತವ್ಯದಿಂದ ಅಮಾನತು ಮಾಡಲಾಗಿದೆ.