ನವದೆಹಲಿ, ಅ 01 (DaijiworldNews/DB): ಪಕ್ಷದ ಕಾರ್ಯಚಟುವಟಿಕೆಗಳಲ್ಲಿ ಬದಲಾವಣೆ ಬಯಸುವುದಾದರೆ ನನ್ನನ್ನು ಬೆಂಬಲಿಸಿ ಎಂದು ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಶಶಿ ತರೂರ್ ಮನವಿ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿದ ಅವರು, ಸೈದ್ದಾಂತಿಕವಾಗಿ ನಮ್ಮಲ್ಲಿ ಯಾವುದೇ ಸಮಸ್ಯೆಗಳಿಲ್ಲ. ಆದರೆ ಪಕ್ಷದ ಕಾರ್ಯಚಟುವಟಿಕೆಗಳಲ್ಲಿ ಬದಲಾವಣೆ ಬಯಸುವವರಲ್ಲಿ ನಾನೂ ಒಬ್ಬ, ಇತರರೂ ಅಂತಹ ಬದಲಾವಣೆ ಬಯಸುವುದಾದಲ್ಲಿ ನನ್ನನ್ನು ಬೆಂಬಲಿಸಬಹುದು. ಆದರೆ ಅವರಿಗೆ ಪಕ್ಷದ ಕಾರ್ಯಚಟುವಟಿಕೆಗಳು ತೃಪ್ತಿ ತಂದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಬೆಂಬಲಿಸಲಿ ಎಂದರು.
ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವ ಉತ್ತಮವಾಗಿಯೇ ಇರುವುದರಿಂದ ಚುನಾವಣೆಯಲ್ಲಿ ಸ್ಪರ್ಧಿಸುವುದು ನಮಗೆ ಸಾಧ್ಯವಾಗಿದೆ. ಚುನಾವಣೆ ಪಕ್ಷಕ್ಕೆ ಉತ್ತಮವಾದ ಆಯ್ಕೆಯೆಂದು ನಾನು ಬರೆದುಕೊಂಡಿದ್ದು, ಅದಕ್ಕೆ ಕಾರಣಗಳನ್ನೂ ಒದಗಿಸಿದೆ. ಇಂತಹ ಸ್ವಾತಂತ್ರ್ಯ ಇನ್ನು ಯಾವುದೇ ಪಕ್ಷದಲ್ಲಿ ಇರಲು ಸಾಧ್ಯವಿಲ್ಲ ಎಂದವರು ತಿಳಿಸಿದರು.
ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಪಕ್ಷದ ಹಲವು ಕಾರ್ಯಕರ್ತರು, ಮುಖಂಡರು ಸಲಹೆ ನೀಡಿದ್ದರಿಂದಲೇ ಸ್ಪರ್ಧೆಗೆ ಮುಂದಾಗಿದ್ದೇನೆ. ಪಕ್ಷವನ್ನು ಇನ್ನಷ್ಟು ಗಟ್ಟಿಗೊಳಿಸುವುದು ಮತ್ತು ಬದಲಾವಣೆಗೆ ದನಿಯಾಗುವುದು ನನ್ನ ಉದ್ದೇಶ. ಪಕ್ಷಕ್ಕೆ ಹೊಸ ನಾಯಕತ್ವ ತೀರಾ ಅಗತ್ಯವಾಗಿದೆ ಎಂದು ಅವರು ಪ್ರತಿಪಾದಿಸಿದರು.