ಮೈಸೂರು, ಅ 03 (DaijiworldNews/DB): ರಾಹುಲ್ ಗಾಂಧಿ ಅಭಿಮಾನಿಯೊಬ್ಬ ತನ್ನ ಎದೆಮೇಲೆ ರಾಹುಲ್ ಟ್ಯಾಟೂ ಹಾಕಿಸಿಕೊಂಡು ಗಮನ ಸೆಳೆದಿದ್ದಾನೆ. ಅಭಿಮಾನಿಯ ಅಭಿಮಾನಕ್ಕೆ ಸ್ವತಃ ರಾಹುಲ್ ಗಾಂಧಿ ಫಿದಾ ಆಗಿದ್ದಾರೆ.
ರಾಜಕಾರಣಿಗಳು, ಚಿತ್ರತಾರೆಯರು, ಕ್ರಿಕೆಟಿಗರು ಸೇರಿದಂತೆ ಪ್ರಸಿದ್ದ ವ್ಯಕ್ತಿಗಳು ಸಾಕಷ್ಟು ಅಭಿಮಾನಿಗಳನ್ನು ಹೊಂದಿರುತ್ತಾರೆ. ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕ, ತಾರೆಯರಿಗೆ ತಮ್ಮ ಅಭಿಮಾನ ತೋರಿಸಲು ವಿವಿಧ ದಾರಿಗಳನ್ನು ಅನುಸರಿಸುತ್ತಾರೆ. ಹಾಗೆಯೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಅಭಿಮಾನಿಯೊಬ್ಬ ತನ್ನ ಅಭಿಮಾನವನ್ನು ತೋರಿಸಿಕೊಳ್ಳುವುದಕ್ಕೆ ಎದೆ ಮೇಲೆ ರಾಹುಲ್ ಗಾಂಧಿಯವರ ಟ್ಯಾಟೂವನ್ನೇ ಹಾಕಿಕೊಂಡಿದ್ದಾನೆ.
ರಮೇಶ್ ನಾಯ್ಕ್ ಎಂಬ ಯುವಕನೇ ಟ್ಯಾಟೂ ಹಾಕಿಸಿಕೊಂಡ ಅಭಿಮಾನಿ. ಮೈಸೂರಿನಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಯಲ್ಲಿ ಈತ ಸಕ್ರಿಯವಾಗಿ ಪಾಲ್ಗೊಂಡಿದ್ದು, ಈ ವೇಳೆ ರಾಹುಲ್ ಗಾಂಧಿಯವರನ್ನು ಭೇಟಿಯಾದ ಆತ ತನ್ನ ಶರ್ಟ್ ತೆಗೆದು ಟ್ಯಾಟೂ ತೋರಿಸಿದ್ದಾನೆ. ಅಲ್ಲದೆ ಅವರೊಂದಿಗೇ ಹೆಜ್ಜೆ ಹಾಕಿದ್ದಾನೆ. ಟ್ಯಾಟೂ ನೋಡಿದ ರಾಹುಲ್ ಅಭಿಮಾನಿಯ ಅಭಿಮಾನಕ್ಕೆ ಮನಸೋತಿದ್ದಾರೆ.