ಅಯೋಧ್ಯಾ, ಅ 04 (DaijiworldNews/DB): ರಾಮಲೀಲಾ ಕಾರ್ಯಕ್ರಮದಲ್ಲಿ ರಾವಣ ಪಾತ್ರ ಮಾಡುತ್ತಿದ್ದ ಕಲಾವಿದರೊಬ್ಬರು ಹೃದಯಸ್ತಂಭನಕ್ಕೊಳಗಾಗಿ ವೇದಿಕೆಯಲ್ಲೇ ಸಾವನ್ನಪ್ಪಿದ ಘಟನೆ ಉತ್ತರ ಪ್ರದೇಶದ ಅಯೋಧ್ಯೆ ಜಿಲ್ಲೆಯಲ್ಲಿ ನಡೆದಿದೆ.
ಕಲಾವಿದ ಪತಿರಾಮ್ (60) ಮೃತಪಟ್ಟವರು. ಐಹಾರ್ ಗ್ರಾಮದಲ್ಲಿ ಸೀತಾ ಹರಣ್ ಸಂಚಿಕೆ ವೇಳೆ ಅವರು ರಾಮನ ಪಾತ್ರವನ್ನು ನಿರ್ವಹಿಸುತ್ತಿದ್ದರು. ಈ ವೇಳೆ ಎದೆನೋವು ಕಾಣಿಸಿಕೊಂಡಿದ್ದು, ಎದೆಯನ್ನು ಗಟ್ಟಿಯಾಗಿ ಹಿಡಿದುಕೊಂಡರು. ಪರಿಸ್ಥಿತಿ ಅರಿವಾದ ಕೂಡಲೇ ಜನರು ಅವರತ್ತ ದೌಡಾಯಿಸಿದ್ದು, ಆದರೆ ಆ ವೇಳೆಗಾಗಲೇ ವೇದಿಕೆಯಲ್ಲೇ ಕುಸಿದು ಬಿದ್ದರು. ಪ್ರದರ್ಶನವನ್ನು ಮೊಟಕುಗೊಳಿಸಿ ಪತಿರಾಮ್ನನ್ನು ರಾಮಲೀಲಾ ಸಮಿತಿ ಸದಸ್ಯರು ಕೂಡಲೇ ಆಸ್ಪತ್ರೆಗೆ ಸಾಗಿಸಿದರು. ಆದರೆ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು.
ಪತಿರಾಮ್ ಅವರು ಹಲವಾರು ವರ್ಷಗಳಿಂದ ರಾವಣನ ಪಾತ್ರ ನಿರ್ವಹಿಸುತ್ತಿದ್ದ ಕಲಾವಿದ ಎಂದು ಗ್ರಾಮದ ಮುಖಂಡ ಪುನಿತ್ಕುಮಾರ್ ತಿಳಿಸಿರುವುದಾಗಿ ವರದಿಯಾಗಿದೆ.
ಫತೇಪುರ್ ಜಿಲ್ಲೆಯಲ್ಲಿ ರಾಮಲೀಲಾದ 'ಲಂಕಾ ದಹನ' ಸಂಚಿಕೆಯಲ್ಲಿ 'ಹನುಮಾನ್' ಪಾತ್ರ ಮಾಡುತ್ತಿದ್ದ 50 ವರ್ಷದ ರಾಮ್ ಸ್ವರೂಪ್ ಅವರು ಕೂಡಾ ಹೃದಯಸ್ತಂಭನದಿಂದ ಸಾವನ್ನಪ್ಪಿದ ಒಂದು ದಿನದ ಅಂತರದಲ್ಲೇ ಇನ್ನೊಬ್ಬ ಕಲಾವಿದನೂ ಇಹಲೋಕ ತ್ಯಜಿಸಿದ್ದಾರೆ.