ನವದೆಹಲಿ, ಅ 10 (DaijiworldNews/DB): ಒಂದು ಸಮುದಾಯವನ್ನು ಸಂಪೂರ್ಣವಾಗಿ ಬಾಯ್ಕಾಟ್ ಮಾಡಬೇಕೆಂದು ಹಲವಾರು ಮಂದಿ ನೆರೆದಿದ್ದ ಸಭೆಯೊಂದರಲ್ಲಿ ಬಿಜೆಪಿ ಶಾಸಕರೊಬ್ಬರು ಬಹಿರಂಗವಾಗಿ ಕರೆ ನೀಡಿದ ಘಟನೆ ಹೈದರಾಬಾದ್ನಲ್ಲಿ ನಡೆದಿದೆ. ಶಾಸಕರ ಮಾತಿಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಪರ-ವಿರೋಧ ಅಭಿಪ್ರಾಯ ವ್ಯಕ್ತವಾಗಿದೆ.
![](https://daijiworld.ap-south-1.linodeobjects.com/Linode/img_tv247/DB-10102022-varma.jpg)
ದೆಹಲಿಯ ಬಿಜೆಪಿ ಶಾಸಕ ಪರ್ವೇಶ್ ಸಾಹಿಬ್ ಸಿಂಗ್ ವರ್ಮಾ ಅವರು ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡುತ್ತಾ, ಸಮುದಾಯವೊಂದನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಹೇಳಿದ್ದಾರೆ.
ಅವರ ತರಕಾರಿ, ಮೀನು ಅಂಗಡಿಗಳು ಹೆಚ್ಚುತ್ತಲೇ ಇವೆ. ಆದರೆ ಯಾವುದನ್ನೂ ನಾವು ಖರೀದಿಸಬಾರದು. ಒಂದು ವೇಳೆ ಪರವಾನಗಿ ಪಡೆಯದೆ ಅಂಗಡಿ ನಡೆಸಿದ್ದಲ್ಲಿ ಕೂಡಲೇ ಆ ಕುರಿತು ಮಾಹಿತಿ ನೀಡಬೇಕು. ಇದಕ್ಕೆ ನೀವೆಲ್ಲರೂ ಒಪ್ಪುವುದಾದಲ್ಲಿ ಕೈ ಎತ್ತಿ ಎಂದಿದ್ದಾರೆ. ಇದಕ್ಕೆ ಕಾರ್ಯಕರ್ತರು ಕೈ ಎತ್ತಿ ಸಹಮತ ಸೂಚಿಸಿದ್ದಾರೆ.
ಆದರೆ ವರ್ಮಾ ಭಾಷಣಕ್ಕೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿದೆ. ಕೆಲವರು ವರ್ಮಾ ಮಾತಿಗೆ ಆಕ್ರೋಶ ವ್ಯಕ್ತಪಡಿಸಿದ್ದರೆ, ಇನ್ನು ಕೆಲವರು ಸಹಮತ ಸೂಚಿಸಿದ್ದಾರೆ. ಹೈದರಾಬಾದ್ ಶಾಸಕ ಅಸಾದುದ್ದೀನ್ ಓವೈಸಿ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರೀವಾಲ್ ಸಹಿತ ವಿವಿಧ ನಾಯಕರು ವರ್ಮಾ ಮಾತಿಗೆ ವಿರೋಧ ವ್ಯಕ್ತಪಡಿಸಿದ್ದಾರೆ.