ನವದೆಹಲಿ, ಅ 13 (DaijiworldNews/DB): ನಿಷೇಧಿತ ಡ್ರಗ್ಸ್ ಸೇವನೆ ಮಾಡಿದ ಆರೋಪದ ಹಿನ್ನಲೆಯಲ್ಲಿ ಭಾರತದ ಒಲಿಂಪಿಕ್ಸ್ ಆಟಗಾರ್ತಿ ಕಮಲ್ ಪ್ರೀತ್ ಅವರಿಗೆ ಮೂರು ವರ್ಷಗಳ ನಿಷೇಧ ಹೇರಲಾಗಿದೆ.
ತನ್ನ ಮೇಲಿದ್ದ ಡೋಪಿಂಗ್ ವಿರೋಧಿ ನಿಯಮದ ಉಲ್ಲಂಘನೆಯ ಆರೋಪವನ್ನು ಕಳೆದ ಸೆಪ್ಟೆಂಬರ್ 27ರಂದು ಕಮಲ್ಪ್ರೀತ್ ಒಪ್ಪಿಕೊಂಡಿರುವುದರಿಂದ ಶಿಕ್ಷೆಯಲ್ಲಿ ಒಂದು ವರ್ಷ ವಿನಾಯಿತಿ ನೀಡಿ 3 ವರ್ಷಗಳಿಗೆ ಶಿಕ್ಷಾ ಅವಧಿಯನ್ನು ಇಳಿಸಲಾಗಿದೆ. ಕಳೆದ ಫೆಬ್ರವರಿ ತಿಂಗಳಲ್ಲಿ ಕಮಲ್ಪ್ರೀತ್ ಅವರು ನಿಷೇಧಿತ ಸ್ಟ್ಯಾನೋಝೋಲೋಲ್ ಡ್ರಗ್ಸ್ನ್ನು ಎರಡು ಚಮಚದಷ್ಟು ಸೇವನೆ ಮಾಡಿರುವುದು ತನಿಖೆಯಲ್ಲಿ ಗೊತ್ತಾಗಿತ್ತು. ಹೀಗಾಗಿ ಅವರ ಮೇಲೆ 2022ರ ಮಾರ್ಚ್ 29ರಿಂದ ಅನ್ವಯವಾಗುವಂತೆ ಮೂರು ವರ್ಷಗಳ ನಿಷೇಧ ಹೇರಲಾಗಿದೆ.
ಟೋಕಿಯೋ ಒಲಿಂಪಿಕ್ಸ್ನಲ್ಲಿ ಪದಕ ಗೆಲ್ಲದಿದ್ದರೂ, ವಿಶೇಷ ಸಾಧನೆ ಮಾಡಿದ ಕಮಲ್ಪ್ರೀತ್ ಭಾರತೀಯರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. 63.70 ಮೀಟರ್ಗಳ ಅತ್ಯುತ್ತಮ ಎಸೆತದೊಂದಿಗೆ ಆರನೇ ಸ್ಥಾನವನ್ನು ತಮ್ಮದಾಗಿಸಿಕೊಂಡಿದ್ದರು. 2004ರಲ್ಲಿ ಅಂಜು ಬಾಬಿ ಜಾರ್ಜ್ ಐದನೇ ಸ್ಥಾನ ಮತ್ತು 2010ರಲ್ಲಿ ಕೃಷ್ಣಾ ಪೂನಿಯಾ ಆರನೇ ಸ್ಥಾನ ಪಡೆದ ನಂತರ 12 ವರ್ಷಗಳ ಬಳಿಕ ಕಮಲ್ ಪ್ರೀತ್ ಆರನೇ ಸ್ಥಾನ ಪಡೆದು ಸಾಧನೆ ಮಾಡಿದ್ದರು. ಈ ನಡುವೆ ಭಾರತದ ಯಾವುದೇ ಮಹಿಳಾ ಆಟಗಾರ್ತಿಗೆ ಸ್ಥಾನ ಸಿಕ್ಕಿರಲಿಲ್ಲ.