ಲಖನೌ, ಅ 18 (DaijiworldNews/DB): ಉತ್ತರ ಪ್ರದೇಶದ ಪೊಲೀಸರು ನಿರಪರಾಧಿಗಳನ್ನು ಹಿಡಿದು ತಪ್ಪಿತಸ್ಥರನ್ನಾಗಿ ಮಾಡುತ್ತಾರೆ ಎಂಬುದಾಗಿ ಉತ್ತರಾಖಂಡದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಧಾ ರಾತುರಿ ಗಂಭೀರ ಆರೋಪ ಮಾಡಿದ್ದಾರೆ.
ಮರಳು ಗಣಿಗಾರಿಕೆ ಮಾಫಿಯಾದಲ್ಲಿ ಭಾಗಿಯಾಗಿರುವವರನ್ನು ಬಂಧಿಸಲು ಗುಡ್ಡಗಾಡು ಪ್ರದೇಶದಲ್ಲಿ ಉತ್ತರ ಪ್ರದೇಶ ಪೊಲೀಸರು ನಡೆಸಿದ ವಿಫಲ ದಾಳಿಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾವುದೇ ಅಪರಾಧವಾದರೂ ಸರಿಯಾದ ತನಿಖೆ ನಡೆದು ನಿಜವಾದ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು. ಆದರೆ ನಿರಪರಾಧಿಗಳನ್ನು, ಅಮಾಯಕರನ್ನು ಹಿಡಿದು ಶಿಕ್ಷಿಸುವುದು ಸರಿಯಲ್ಲ. ಉತ್ತರ ಪ್ರದೇಶ ಪೊಲೀಸರು ಹಲವು ಬಾರಿ ಅಮಾಯಕರನ್ನು ಹಿಡಿದು ತಪ್ಪಿತಸ್ಥರನ್ನಾಗಿ ಮಾಡಿದ್ದಾರೆ ಎಂದು ಆರೋಪಿಸಿದರು.
ಯಾವುದೇ ತಪ್ಪು ಮಾಡದ ಒಬ್ಬ ಅಮಾಯಕನನ್ನು ಹಿಡಿದರೆ ಅದು 99 ಮಂದಿ ಅಪರಾಧಿಗಳ ಉಗಮಕ್ಕೆ ಕಾರಣವಾಗಬಹುದು ಎಂಬುದನ್ನು ಯುಪಿ ಪೊಲೀಸರು ಮನನ ಮಾಡಿಕೊಳ್ಳಬೇಕು ಎಂದವರು ಇದೇ ವೇಳೆ ತಿಳಿಸಿದರು.
ಇನ್ನು ರಾಧಾ ರಾತುರಿ ಹೇಳಿಕೆಯನ್ನು ಬೇಜವಾಬ್ದಾರಿ ಹೇಳಿಕೆ ಎಂದಿರುವ ಉತ್ತರ ಪ್ರದೇಶ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಪ್ರಶಾಂತ್ ಕುಮಾರ್, ಉನ್ನತ ಅಧಿಕಾರಿಗಳು ಈ ರೀತಿಯ ಹೇಳಿಕೆಗಳನ್ನು ನೀಡುವುದು ಸರಿಯಲ್ಲ. ಅವರು ವಾಸ್ತವಾಂಶಗಳನ್ನು ಅರಿಯದೇ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.