ಚೆನ್ನೈ, ಡಿ 14 (DaijiworldNews/DB): ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ಪುತ್ರ ಉದಯನಿಧಿ ಸ್ಟಾಲಿನ್ ಸಚಿವರಾಗಿ ಬುಧವಾರ ಪ್ರಮಾಣವಚನ ಸ್ವೀಕರಿಸಿದ್ದಾರೆ. ಆ ಮೂಲಕ ಎಂ. ಕರುಣಾನಿಧಿ ಕುಟುಂಬದ ಮೂರನೇ ಪೀಳಿಗೆ ಸಚಿವ ಸ್ಥಾನ ಪಡೆದಂತಾಗಿದೆ.
ರಾಜಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲ ಆರ್.ಎನ್. ರವಿ ಅವರು ಉದಯನಿಧಿ ಅವರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಯುವ ಕಲ್ಯಾಣ ಹಾಗೂ ಕ್ರೀಡಾಭಿವೃದ್ಧಿ ಖಾತೆಯ ಸಚಿವರಾಗಿ ಉದಯನಿಧಿ ಪ್ರಮಾಣವಚನ ಸ್ವೀಕರಿಸಿದರು.
45 ವರ್ಷದ ಉದಯನಿಧಿ ಅವರು ಚೆಪಾಕ್-ತಿರುವಳ್ಳಿಕೇಣಿ ಕ್ಷೇತ್ರದಲ್ಲಿ 2021ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಶಾಸಕರಾಗಿ ವಿಧಾನಸಭೆಗೆ ಪ್ರವೇಶ ಮಾಡಿದ್ದರು. ಇದರೊಂದಿಗೆ ಡಿಎಂಕೆಯ ಪ್ರಧಾನ ಕಾರ್ಯದರ್ಶಿಯಾಗಿಯೂ ಅನುಭವ ಹೊಂದಿದ್ದಾರೆ. ನಟ, ನಿರ್ಮಾಪಕ ಹಾಗೂ ಸಿನಿಮಾ ಡಿಸ್ಟ್ರಿಬ್ಯೂಟರ್ ಆಗಿಯೂ ಗಮನ ಸೆಳೆದಿದ್ದಾರೆ.
ತಂದೆಯ ಸಂಪುಟದಲ್ಲಿ ಸಚಿವನಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಉದಯನಿಧಿ, ಬಹುದೊಡ್ಡ ಜವಾಬ್ದಾರಿಯನ್ನು ನನಗೆ ನೀಡಿದ್ದಾರೆ. ರಾಜ್ಯದ ಸಮಗ್ರ ಅಭಿವೃದ್ದಿಗೆ ಶ್ರಮಿಸುತ್ತೇನೆ ಎಂದಿದ್ದಾರೆ.
ಇನ್ನು ಮೊದಲ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಉದಯನಿಧಿ ಅವರಿಗೆ ಸಚಿವ ಸ್ಥಾನ ನೀಡಿದ್ದಕ್ಕೆ ಪ್ರತಿಪಕ್ಷಗಳಾದ ಎಐಎಡಿಎಂಕೆ ಹಾಗೂ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿವೆ. ಕುಟುಂಬ ರಾಜಕಾರಣದ ಸಂಕೇತವಾಗಿ ಉದಯನಿಧಿ ಅವರಿಗೆ ಸಚಿವ ಪಟ್ಟ ನೀಡಲಾಗಿದೆ ಎಂದು ಪ್ರತಿಪಕ್ಷಗಳು ಅಸಮಾಧಾನ ಹೊರ ಹಾಕಿವೆ.