ಮಿರ್ಜಾಪುರ, ಡಿ 23 (DaijiworldNews/DB): ಉತ್ತರಪ್ರದೇಶದ ಬಡ ಕುಟುಂಬವೊಂದರಲ್ಲಿ ಬೆಳೆದ ಯುವತಿಯೊಬ್ಬಳು ಭಾರತೀಯ ವಾಯಸೇನೆಯ ಫೈಟರ್ ಪೈಲಟ್ ಆಗಿ ಆಯ್ಕೆಯಾಗಿದ್ದಾರೆ. ಅಲ್ಲದೆ ಭಾರತೀಯ ವಾಯುಸೇನೆಯ ಮೊದಲ ಮುಸ್ಲಿಂ ಮಹಿಳಾ ಪೈಲಟ್ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.
ಮಿರ್ಜಾಪುರದ ಜಸೋವರ್ ನಿವಾಸಿಯಾಗಿರುವ ಸಾನಿಯಾ ಮಿರ್ಜಾ ಅವರೇ ಈ ಹುದ್ದೆಗೆ ಆಯ್ಕೆಯಾದ ಯುವತಿ. ಬಡತನದಲ್ಲಿ ಬೆಳೆದವರು. ತಂದೆ ಶಾಹಿದ್ ಅಲಿ ಟಿವಿ ಮೆಕ್ಯಾನಿಕ್ ಆಗಿದ್ದು, ಅದರಲ್ಲಿ ದುಡಿದ ಹಣವೇ ಕುಟುಂಬ, ಶಿಕ್ಷಣದ ಖರ್ಚಿಗೆ ತಗುಲುತ್ತಿತ್ತು. ಬಡ ಮನೆಯ ಕುಡಿಯೊಂದು ದೇಶದ ವಾಯಸೇನೆಯ ಫೈಟರ್ ಪೈಲಟ್ ಆಗಿ ಆಯ್ಕೆಯಾಗಿರುವುದು ಊರಿನಲ್ಲಿ ಹಬ್ಬದ ಸಂಭ್ರಮಕ್ಕೆ ಕಾರಣವಾಗಿದೆ.
ಹಿಂದಿ ಮಾಧ್ಯಮದಲ್ಲಿ ಓದಿರುವ ಸಾನಿಯಾ, ರಾಷ್ಟ್ರೀಯ ರಕ್ಷಣಾ ಅಕಾಡೆಮಿ ನಡೆಸುವ ಪರೀಕ್ಷೆ ಎದುರಿಸಿದ್ದರು. 2022ರ ಈ ಪರೀಕ್ಷೆಯಲ್ಲಿ ಫೈಟರ್ ಪೈಲಟ್ ವಿಭಾಗದಲ್ಲಿ ಕೇವಲ ಎರಡು ಸ್ಥಾನ ಮಹಿಳೆಯರಿಗೆ ಮೀಸಲಿತ್ತು. ಎರಡನೇ ಪ್ರಯತ್ನದಲ್ಲಿ ಸಾನಿಯಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಈ ಹುದ್ದೆಗೆ ಆಯ್ಕೆಯಾಗಿದ್ದಾರೆ. ದೇಶದ ಮೊದಲ ಫೈಟರ್ ಪೈಲಟ್ ಅವ್ನಿ ಚತುರ್ವೇದಿಯಂತಾಗಬೇಕೆಂಬ ಕನಸು ಕಂಡಿದ್ದ ಸಾನಿಯಾ ಇದೀಗ ತನ್ನ ಕನಸನ್ನು ನನಸು ಮಾಡಿಕೊಂಡಿದ್ದಾರೆ. ಸಾಧನೆಯ ಖುಷಿಯನ್ನು ಹೆತ್ತವರಿಗೆ ಅರ್ಪಿಸುವುದಾಗಿ ಸಾನಿಯಾ ಹೇಳಿಕೊಂಡಿದ್ದಾರೆ.