ಮಂಗಳೂರು, ಡಿ 28 (DaijiworldNews/SM): ದೇಶದ ಪ್ರಮುಖ ಕಡಲ ತೀರ, ವರ್ಷಂಪ್ರತಿ ದೇಶ, ವಿದೇಶಗಳ ದಾಖಲೆ ಸಂಖ್ಯೆಯ ಪ್ರವಾಸಿಗರು ಭೇಟಿ ನೀಡುವ ಪಣಂಬೂರು ಬೀಚ್, ಗೋವಾ ಮಾದರಿಯಲ್ಲಿ ಅಭಿವೃದ್ಧಿ ಹೊಂದಲಿದೆ.
ತೌಕ್ತೆ ಚಂಡಮಾರುತ ಪರಿಣಾಮ ಕಡಲ್ಕೊರೆತ ಹಾಗೂ ಕೋವಿಡ್ ಹೊಡೆತದಿಂದ ಪಣಂಬೂರು ಬೀಚ್ ತನ್ನ ಮೂಲ ಸೌಂದರ್ಯವನ್ನು ಕಳೆದುಕೊಂಡು ನಿರ್ವಣೆಯಿಲ್ಲದೆ ಸೊರಗಿತ್ತು. ಕರಾವಳಿಯಲ್ಲಿ ಬೀಚ್ ಟೂರಿಸಂ ಉತ್ತೇಜಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಪಣಂಬೂರು ಬೀಚ್ ನಿರ್ವಹಣೆಗೆ ಟೆಂಡರ್ ಕರೆದಿದ್ದು, ಮಂಗಳೂರಿನ ಭಂಡಾರಿ ಬಿಲ್ಡರ್ಸ್ ಸಹಸಂಸ್ಥೆ ಎಲ್ಆರ್ಎಸ್ ಬೀಚ್ಟೂರಿಸಂ ಸಂಸ್ಥೆಯು 10 ವರ್ಷ ನಿರ್ವಹಣಾ ಗುತ್ತಿಗೆ ಪಡೆದುಕೊಂಡಿದೆ. ಬೀಚ್ ಅಭಿವೃದ್ಧಿಯಿಂದ ಜಿಲ್ಲಾಡಳಿತಕ್ಕೆ ವಾರ್ಷಿಕ 1.20 ಕೋಟಿ ರೂ. ಆದಾಯ ಬರುವ ನಿರೀಕ್ಷೆ ಇದೆ.
ಎಲ್ಆರ್ ಎಸ್ ಬೀಚ್ ಟೂರಿಸಂ ಸಂಸ್ಥೆಗೆ 15.58 ಎಕರೆ ವಿಶಾಲ ಕಿನಾರೆಯನ್ನು ಪಣಂಬೂರು ಬೀಚ್ ಅಭಿವೃದ್ಧಿಗಾಗಿ ಜಿಲ್ಲಾಡಳಿತವು ನೀಡಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರವಾಸಿಗರನ್ನು ಆಕರ್ಷಿಸುವ ಉದ್ದೇಶದಿಂದ ಅಂತಾರಾಷ್ಟ್ರೀಯ ಗುಣಮಟ್ಟದ ಫುಡ್ ಕೋರ್ಟ್ ನಿರ್ಮಾಣವಾಗಲಿದೆ. ಜತೆಗೆ ಗೋವಾ ಮಾದರಿಯ ಬೀಚ್ ವಿಲ್ಲಾಗಳು, ಸಸ್ಯಾಹಾರಿ ಹಾಗೂ ಮಾಂಸಾಹಾರಿ ರೆಸ್ಟೋರೆಂಟ್ ಗಳು ನಿರ್ಮಾಣಗೊಳ್ಳಲಿವೆ. ಬೃಹತ್ ಸಮಾವೇಶ, ಮದುವೆ ಸಮಾರಂಭ, ನೈಟ್ ಅ್ಯಂಡ್ ಡೇ ಪಾರ್ಟಿ ಕಾರ್ಯಕ್ರಮಗಳಿಗೆ ಪಣಂಬೂರು ಬೀಚ್ ತೆರೆದುಕೊಳ್ಳಲಿದೆ ಎಂದು ಎಲ್ ಆರ್ ಎಸ್ ಟೂರಿಸಂ ಸಂಸ್ಥೆ ಪಾಲುದಾರರಾದ ಲಕ್ಷ್ಮೀಶ್ ಭಂಡಾರಿ ತಿಳಿಸಿದ್ದಾರೆ.
ಬೀಚ್ ಟೂರಿಸಂ ಉತ್ತೇಜನದಿಂದ ಇಲ್ಲಿ ಜಲಕ್ರೀಡೆಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡಿದ್ದು, ವಾಟರ್ ಬೋಟ್ ರೈಡ್, ಸ್ಪೀಡ್ ಬೋಟಿಂಗ್, ಜೆಸ್ಕಿ, ಬನಾನ ರೈಡ್, ಬಂಪರ್ ರೈಡ್, ಸಾಂಪ್ರದಾಯಿಕ ದೋಣಿ ವಿಹಾರ ಆಯೋಜಿಸಲು ಯೋಜನೆ ಹಮ್ಮಿಕೊಂಡಿದೆ. ಗೋವಾ ಹೊರತುಪಡಿಸಿ ದೇಶದ ಪ್ರಮುಖ ಬೀಚ್ ಗಳಲ್ಲಿ ಕಂಡುಬರುವ ಜಲಕ್ರೀಡೆಗಳು ಪಣಂಬೂರು ಬೀಚ್ ನ ಪ್ರಮುಖ ಆಕರ್ಷಣೆಯಾಗಲಿವೆ ಎನ್ನುವುದು ಮತ್ತೋರ್ವ ಪಾಲುದಾರ ಡಾ. ರಾಜೇಶ್ ಹುಕ್ಕೇರಿಯವರ ಮಾತು.
ಈಗಾಗಲೇ ಕರಾವಳಿ ದೇಶ ವಿದೇಶದ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ. ಪಣಂಬೂರು ಬೀಚ್ ಅಭಿವೃದ್ಧಿಗೊಂಡಲ್ಲಿ ಮುಂದಿನ ದಿನಗಳಲ್ಲಿ ಪ್ರವಾಸಿಗರ ಸಂಖ್ಯೆಯಲ್ಲೂ ಹೆಚ್ಚಳವಾಗಲಿದ್ದು, ವ್ಯಾಪಾರ ವಹಿವಾಟು ಕೂಡ ಬೆಳೆಯಲಿದೆ.