ಡೆಹ್ರಾಡೂನ್, ಜ 05 (DaijiworldNews/DB): ಮೂಗಿನಲ್ಲಿ ಆಗುತ್ತಿರುವ ಕಿರಿಕಿರಿ ಸಹಿಸಲಾಗದೆ ವೈದ್ಯರ ಬಳಿ ಹೋಗಿದ್ದ ವ್ಯಕ್ತಿಯೊಬ್ಬನ ಮೂಗಿನಲ್ಲಿ ಜಿಗಣೆ ಇದ್ದ ವಿಚಿತ್ರ ಪ್ರಕರಣ ಉತ್ತರಾಖಂಡ್ ನಲ್ಲಿ ನಡೆದಿದೆ. ಮೂಗಿನಲ್ಲಿ ಜಿಗಣೆ ನೋಡಿ ವೈದ್ಯರೇ ಹೌಹಾರಿದ್ದಾರೆ.

ಡೆಹ್ರಾಡೂನ್ ನ ತೆಹ್ರಿ ಹಿಂದೋಲಾಖಾಲ್ ಬ್ಲಾಕ್ ನಿವಾಸಿ ರಾಮಲಾಲ್ (55) ಎಂಬವರಿಗೆ ಕಳೆದ ಕೆಲವು ವಾರಗಳಿಂದ ಮೂಗಿನೊಳಗೆ ಸಹಿಸಲಸಾಧ್ಯವಾದ ನೋವಿತ್ತು. ಕಚ್ಚಿ ಎಳೆದಂತಾಗುವುದು, ಪದೇಪದೇ ರಕ್ತಸ್ರಾವ ಕಂಡು ಬಂದಿತ್ತು. ಹಲವು ವೈದ್ಯರಿಗೆ ತೋರಿಸಿದರೂ ಸಮಸ್ಯೆ ನಿವಾರಣೆಯಾಗಿರಲಿಲ್ಲ. ಹೀಗಾಗಿ ಶ್ರೀನಗರದಲ್ಲಿ ಇಎನ್ ಟಿ ವೈದ್ಯರೊಬ್ಬರನ್ನು ಭೇಟಿಯಾದರು. ಕೂಲಂಕುಷವಾಗಿ ಪರಿಶೀಲಿಸಿದ ವೈದ್ಯರಿಗೆ ರಾಮ್ ಲಾಲ್ ಅವರ ಮೂಗಿನೊಳಗೆ ಆರು ಇಂಚು ಉದ್ಧ ಜಿಗಣೆ ಇರುವುದು ಗೊತ್ತಾಗಿತ್ತು. ಬಳಿಕ ಅದನ್ನು ಹೊರ ತೆಗೆಯಲಾಯಿತು. ಸದ್ಯ ಅವರ ಆರೋಗ್ಯ ಸುಧಾರಿಸಿದ್ದು, ಅಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
ಜಿಗಣೆ ಅವರ ಮೂಗಿನೊಳಗೆ ಹೇಗೆ ಸೇರಿಕೊಂಡಿತು ಎಂಬುದು ಗೊತ್ತಾಗಿಲ್ಲ. ಬಹುಶಃ ಗುಡ್ಡಗಾಡು ಪ್ರದೇಶದಲ್ಲಿ ಹೋಗಿದ್ದಾಗ ಜಿಗಣೆ ಮೂಗು ಸೇರಿರುವ ಸಾಧ್ಯತೆ ಇದೆ ಎನ್ನಲಾಗಿದೆ.