ಪಣಜಿ, ಫೆ 16 (DaijiworldNews/DB): ರಜಾ ಕಳೆಯುವುದಕ್ಕಾಗಿ ಭಾರತಕ್ಕೆ ಬಂದಿರುವ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರ ಪತ್ನಿ ಅಕ್ಷತಾ ಮೂರ್ತಿ ಹೆತ್ತವರಾದ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಹಾಗೂ ಸುಧಾ ಮೂರ್ತಿ ಅವರೊಂದಿಗೆ ಗೋವಾದ ಬೀಚ್ನಲ್ಲಿ ದಿನಗಳೆದಿದ್ದಾರೆ.
ದಕ್ಷಿಣ ಗೋವಾದ ಬೆನಾಲಿಮ್ ಬೀಚ್ನಲ್ಲಿ ಹೆತ್ತವರು ಮತ್ತು ತಮ್ಮಿಬ್ಬರು ಮಕ್ಕಳೊಂದಿಗೆ ಅಕ್ಷತಾ ಮೂರ್ತಿ ಸಂಭ್ರಮಿಸಿದ್ದಾರೆ. ಇದೇ ವೇಳೆ ವಾಟರ್ ಸ್ಪೋರ್ಟ್ಸ್ ಉದ್ಯಮಿ, ಸ್ಥಳೀಯರಾದ ಫ್ರಾನ್ಸಿಸ್ಕೊ ಫೆರ್ನಾಂಡಿಸ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ವಿಶೇಷವೆಂದರೆ ಫ್ರಾನ್ಸಿಸ್ಕೊ ಅವರು ಅಕ್ಷತಾ ಅವರನ್ನು ಸಾಮಾನ್ಯ ಪ್ರವಾಸಿಗರೆಂದೇ ಭಾವಿಸಿದ್ದರು. ಬಳಿಕ ಅಲ್ಲಿದ್ದ ಅವರ ಸ್ನೇಹಿತರೊಬ್ಬರು ಬ್ರಿಟನ್ ಪ್ರಧಾನಿಯವರ ಪತ್ನಿ ಎಂದು ಹೇಳಿದ ಬಳಿಕವೇ ಅವರಿಗೆ ವಿಷಯ ಗೊತ್ತಾಗಿತ್ತು.
ಇನ್ನು ನಾರಾಯಣ ಮೂರ್ತಿ, ಸುಧಾ ಮೂರ್ತಿ ಮತ್ತು ಅಕ್ಷತಾ ಮೂರ್ತಿ ಅವರ ಸರಳ ವ್ಯಕ್ತಿತ್ವಕ್ಕೆ ತಾನು ಚಕಿತಗೊಂಡಿದ್ದೇನೆ. ಈ ಭೇಟಿ ಸ್ಮರಣೀಯವಾದುದು ಎಂದು ಫ್ರಾನ್ಸಿಸ್ಕೊ ಹೇಳಿಕೊಂಡಿದ್ದಾರೆ ಎಂದು ವರದಿಯಾಗಿದೆ.