ನವದೆಹಲಿ, ಫೆ 22 (DaijiworldNews/DB): ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ವಿಫಲ ಸಚಿವ ಎಂದು ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರೀನಾತೆ ಜರೆದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚೀನಾದ ಆರ್ಥಿಕತೆ ದೊಡ್ಡದು ಮತ್ತು ನಮ್ಮ ದೇಶದ ಆರ್ಥಿಕತೆ ಸಣ್ಣದು ಎನ್ನುವ ಮೂಲಕ ದೇಶ ನಿಂದನೆಯ ಮಾತುಗಳನ್ನಾಡಿದ್ದಾರೆ. ಚೀನಾದೊಂದಿಗೆ ಹೋರಾಟ ಅಸಾಧ್ಯ ಎಂದಿರುವ ಅವರು ನಮಗೆ ನಮ್ಮ ದೇಶದ ಪ್ರಾದೇಶಿಕ ಸಾರ್ವಭೌಮವನ್ನು ರಕ್ಷಿಸಿಕೊಳ್ಳಲು ಆಗುವುದಿಲ್ಲ ಎಂದಿರುವುದೇ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದರು.
ಚೀನಾದೊಂದಿಗೆ ಹೋರಾಡುವುದು ಅಸಾಧ್ಯ ಎನ್ನುವ ಮೂಲಕ ಅವರು ನಮ್ಮ ಸೇನಾಪಡೆಯ ಶೌರ್ಯಕ್ಕೆ ಅವಮಾನ ಮಾಡಿದ್ದಾರೆ. ಅವರ ಮನೋಸ್ಥೈರ್ಯವನ್ನು ಕುಗ್ಗಿಸುವಂತಹ ಹೇಳಿಕೆಯನ್ನು ವಿದೇಶಾಂಗ ಸಚಿವರು ನೀಡಿದ್ದಾರೆ ಎಂದು ಕಿಡಿ ಕಾರಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಚೀನಾ ವಿಚಾರವಾಗಿ ಮೌನ ವಹಿಸಿರುವುದೇಕೆ ಎಂದು ಪ್ರಶ್ನಿಸಿರುವ ಅವರು, ಚೀನಾ ಆಕ್ರಮಣದ ಬಗ್ಗೆ ಅವರು ಏನನ್ನೂ ಮಾತನಾಡುತ್ತಿಲ್ಲ. ನಮ್ಮ ಸೈನಿಕರ ತ್ಯಾಗದ ಕುರಿತು ಏನು ಮಾತನಾಡುವಿರಿ ಎಂದಿದ್ದಾರೆ.