ಉಡುಪಿ, ಫೆ 23 (DaijiworldNews/MS): ಉಡುಪಿ ನಗರ ಮತ್ತು ನಗರದ ಹೊರವಲಯ ಸೇರಿದಂತೆ ಹಲವು ಕಡೆಗಳಲ್ಲಿ ಫೆ 23ರ ಗುರುವಾರದಂದು ದಟ್ಟವಾದ ಮಂಜಿನ ವಾತಾವರಣ ಕಂಡು ಬಂದಿದ್ದು ದಿನನಿತ್ಯದ ಕೆಲಸಗಳಿಗೆ ಹೋಗುವ ಜನರು ದಟ್ಟ ಮಂಜಿನ ವಾತವಾರಣದಿಂದ ಪರದಾಟುವಂತಾಯಿತು.
ಕಳೆದೆರಡು ದಿನಗಳಿಂದ ತೀವ್ರವಾದ ಸೆಕೆಯನ್ನು ಅನುಭವಿಸಿದ್ದ ಜನರಿಗೆ ಇಂದು ಮುಂಜಾನೆಯ ದಟ್ಟ ಮಂಜು ಕುತೂಹಲದ ಜೊತೆಗೆ ಅಚ್ಚರಿ ಮೂಡಿಸಿತು. ಉಡುಪಿ ನಗರ, ಮಲ್ಪೆ, ಮಣಿಪಾಲ, ಕಾಪು ಮತ್ತು ಜಿಲ್ಲೆಯ ಇನ್ನೂ ಹಲವೆಡೆಗಳಲ್ಲಿ ಮಂಜು ಆವರಿಸಿದ್ದು ರಸ್ತೆಯಲ್ಲಿ ಎದುರಿನಿಂದ ಬರುತ್ತಿರುವ ವಾಹನಗಳು ಕೂಡಾ ಕಾಣದ ಪರಿಸ್ಥಿತಿ ಉಂಟಾಗಿತ್ತು.
ಬೆಳಗ್ಗೆ ಸುಮಾರು 8:30 ರ ವರೆಗೂ ಇದೇ ಪರಿಸ್ಥಿತಿ ಮುಂದುವರೆದು ಇದೀಗ ವಾತಾರವಣ ಸಹಜ ಸ್ಥಿತಿಗೆ ಮರಳುತ್ತಿದೆ.
ಇನ್ನೂ ಪ್ರಕೃತಿಯಲ್ಲಿ ಮಾತ್ರವಲ್ಲದೇ ಎಲ್ಲರ ವಾಟ್ಸ್ಯಾಪ್, ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಕೂಡಾ ಮಂಜು ಕವಿದ ವಾತಾವರಣದ ಫೋಟೋ, ವಿಡಿಯೋಗಳು ರಾರಾಜಿಸಿದವು