ಹುಣಸೂರು, ಏ 20 (DaijiworldNews/HR): ಸುಡಾನ್ನಲ್ಲಿ ನಡೆಯುತ್ತಿರುವ ಸೇನೆ ಹಾಗೂ ಅರಸೇನಾ ಪಡೆಗಳ ನಡುವಿನ ಕಾದಾಟ ತಾರಕಕ್ಕೇರಿದ್ದು, ಸಂಘರ್ಷದಲ್ಲಿ ಕರ್ನಾಟಕದ 800 ಮಂದಿ ಸೇರಿದಂತೆ ಮೈಸೂರು ಜಿಲ್ಲೆಯ ಹುಣಸೂರು ಮತ್ತು ಎಚ್.ಡಿ.ಕೋಟೆ ತಾಲೂಕಿನ ಸುಮಾರು 80ಕ್ಕೂ ಹೆಚ್ಚು ಹಕ್ಕಿಪಿಕ್ಕಿ ಸಮುದಾಯದ ಮಂದಿ ಸಿಲುಕಿಕೊಂಡಿದ್ದು, ಸರಕಾರ ನೆರವಿಗೆ ಬರಬೇಕೆಂದು ಮನವಿ ಮಾಡಿದ್ದಾರೆ.
ದಕ್ಷಿಣ ಆಫ್ರಿಕಾದ ಸುಡಾನ್ಗೆ ಕಳೆದ ಮೂರ್ನಾಲ್ಕು ತಿಂಗಳ ಹಿಂದೆ ಇಲ್ಲಿನ ಹಕ್ಕಿಪಿಕ್ಕಿ ಸಮುದಾಯದವರು ತಾವೇ ತಯಾರಿಸುವ ಕೇಶ ತೈಲ ಮಾರಾಟ, ಮಸಾಜ್ ಮಾಡಲು ತೆರಳಿದ್ದರು. ಈ ನಡುವೆ ಮಿಲಿಟರಿ ಹಾಗೂ ಅರೆ ಸೇನಾಪಡೆಗಳ ನಡುವೆ ದಂಗೆ ಎದ್ದಿದ್ದು, ಇಡೀ ಸುಡಾನ್ ದೇಶದಲ್ಲಿ ತುರ್ತು ಪರಿಸ್ಥಿತಿ ಇದ್ದು, ವಿಮಾನ ನಿಲ್ದಾಣವನ್ನು ಧ್ವಂಸ ಮಾಡಲಾಗಿದೆ.
ಇನ್ನು ಮನೆಯಿಂದ ಹೊರಬರಲಾಗದೆ ಊಟ-ತಿಂಡಿ, ಕುಡಿಯುವ ನೀರಿಗೂ ತತ್ವಾರ ಉಂಟಾಗಿದ್ದು, ಪರಿತಪಿಸುತ್ತಿದ್ದಾರೆ. ಅಲ್ಲಿನ ದೇಶದವರು ಬೇರೆಕಡೆಗೆ ವಲಸೆ ಹೋಗುತ್ತಿದ್ದಾರೆ.
ಮೊಬೈಲ್ ಮೂಲಕ ಗ್ರೂಪ್ ರಚಿಸಿಕೊಂಡು ಅಲ್ಲಿನ ಪರಿಸ್ಥಿತಿ ಕುರಿತು ಮಾಹಿತಿಯನ್ನು ತಾಯ್ನಾಡಿನಲ್ಲಿರುವ ಮಕ್ಕಳು, ಹಿರಿಯರಿಗೆ ರವಾನಿಸುತ್ತಿದ್ದಾರೆ.