ಕುಂದಾಪುರ, ಸೆ 17 (DaijiworldNews/HR): ಆಯುರ್ವೇದ ಎನ್ನುವುದು ದೇಶದ ಸ್ವಾಸ್ಥ್ಯ. ಆರೋಗ್ಯವಂತ ಸಮಾಜವೇ ದೇಶದ ಆಸ್ತಿ ಎಂದು ಅಮೃತೇಶ್ವರಿ ಎಜ್ಯುಕೇಶನ್ ಟ್ರಸ್ಟ್ ಕೋಟೇಶ್ವರ ಇದರ ಕಾರ್ಯದರ್ಶಿ ಬೈಲೂರು ಉದಯಕುಮಾರ್ ಶೆಟ್ಟಿ ಹೇಳಿದರು.
ಅವರು ಶಂಕರನಾರಾಯಣದ ಹಾಲು ಉತ್ಪಾದಕರ ಸಹಕಾರಿ ಸಂಘದ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ರೋಟರಿ ಕ್ಲಬ್ ಶಂಕರನಾರಾಯಣ, ಕುಂದಾಪುರ ರೂರಲ್ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಕೋಟೇಶ್ವರ, ಅಮೃತೇಶ್ವರಿ ಶಿಕ್ಷಣ ಸಂಸ್ಥೆ, ಕೋಟೇಶ್ವರ, ಯುವಿಎ ಯುವ ಮೆರಿಡಿಯನ್ ಹೋಟೆಲ್, ಅಮ್ಯೂಸೈಂಟ್ ಪಾರ್ಕ್, ಕನ್ವೆನ್ಷನ್ ಸೆಂಟರ್ ಕೋಟೇಶ್ವರ ಇವರ ಸಹಯೋಗದೊಂದಿಗೆ ನಡೆದ ಉಚಿತ ಆಯುರ್ವೇದ ತಪಾಸಣೆ, ಚಿಕಿತ್ಸೆ ಹಾಗೂ ಔಷಧ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜಪಾನ್, ಚೈನಾ ಮೊದಲಾದೆಡೆ ಈಗಲೂ ಎಂಭತ್ತು ವರ್ಷಕ್ಕಿಂತ ಹೆಚ್ಚು ಬದುಕುತ್ತಾರೆ. ಅಲ್ಲೆಲ್ಲ ವರ್ಷಪೂರ್ತಿ ಕೆಲಸ ಮಾಡುತ್ತಾರೆ ಮತ್ತು ಆಯುರ್ವೇದ ಔಷಧಿಗಳನ್ನು ಒಪ್ಪಿಕೊಂಡಿದ್ದಾರೆ. 35ಕ್ಕಿಂತ ಹೆಚ್ಚು ಜನ ಕೆಲಸ ಮಾಡುತ್ತಾರೆ. 100 ಬೆಡ್ ಗಳ ಆಸ್ಪತ್ರೆ ಇದೆ. ಜನರಿಗೆ ಫಲಿತಾಂಶ ಸಿಕ್ಕರೆ ನಮಗೆ ತೃಪ್ತಿ. ಯಾವುದೇ ಆರೋಗ್ಯ ತಪಾಸಣಾ ಶಿಬಿರದಲ್ಲಿ ತಗಲುವ ಔಷಧಿಯ ಖರ್ಚುಗಳನ್ನು ಉಚಿತವಾಗಿ ಪೂರೈಸುವ ಭರವಸೆ ನೀಡಿದರು.
ಪ್ರಾಸ್ತಾವಿಸಿ ಮಾತನಾಡಿದ ಮಮತಾ ಆರ್ ಶೆಟ್ಟಿ, ಆರೋಗ್ಯ ಸರಿ ಇದ್ದರೆ ಬದುಕು ಸುಸೂತ್ರವಾಗುತ್ತದೆ. ಹಿಂದೆಲ್ಲ ನಮ್ಮ ಹಿರಿಯರು ನಮ್ಮ ಸುತ್ತಮುತ್ತಲಿನ ಗಿಡಮೂಲಿಕೆಗಳನ್ನು ಬಳಸಿ ದೀರ್ಘಾಯುಷಿಗಳಾಗುತ್ತಿದ್ದರು ಎಂದರು.
ಡಾ. ಸಚ್ಚಿದಾನಂದ ವೈದ್ಯ ಮಾತನಾಡಿ, ಆಹಾರ ಮತ್ತು ಮನಸ್ಸು ಎರಡನ್ನೂ ಉತ್ತಮವಾಗಿ ಇಟ್ಟುಕೊಂಡಾಗ ಜೀವನ ಸ್ವಾಸ್ಥ್ಯ ಎಂದರು.
ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಪ್ರಸನ್ನ ಕುಮಾರ್ ಐತಾಳ್ ಮಾತನಾಡಿ, ನಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಿಸುವುದು ಮತ್ತು ರೋಗಕ್ಕೆ ಚಿಕಿತ್ಸೆ ಇರುವುದೇ ಆಯುರ್ವೇದದಲ್ಲಿ. ಆಯುರ್ವೇದ ಎನ್ನುವುದು ಶರೀರ, ಮನಸ್ಸು ಮತ್ತು ಆತ್ಮ ನಿಯಂತ್ರಣ. ನಮ್ಮ ಸಂಸ್ಥೆಯು ಗ್ರಾಮೀಣ ಪ್ರದೇಶದ ಜನರಿಗೆ ಉಚಿತವಾಗಿ ಆಯುರ್ವೇದ ಮಾಹಿತಿ ನೀಡುತ್ತದೆ. 14 ವಿವಿಧ ವಿಭಾಗಳ ಒಪಿಡಿ, 100 ಹಾಸಿಗೆ, 100 ವಿದ್ಯಾರ್ಥಿಗಳಿಗೆ ಪ್ರವೇಶ ಅವಕಾಶ ಇದೆ. 10% ಚಿಕಿತ್ಸೆಯಲ್ಲಿ ರಿಯಾಯಿತಿ ಇದೆ. ಎಂದರು.
ಮೃದುಲಾ ಎಸ್. ಹೆಗ್ಡೆ ಪ್ರಾರ್ಥಿಸಿದರು. ಶಾಮ ಶೆಟ್ಟಿ ಸ್ವಾಗತಿಸಿದರು. ಮಮತಾ ಆರ್ ಶೆಟ್ಟಿ ಪ್ರಾಸ್ತಾವಿಸಿದರು. ಶಂಕರನಾರಾಯಣ ರೋಟರಿ ಕ್ಲಬ್ ಅಧ್ಯಕ್ಷ ಶರತ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಅನಿಲ್ ವಂದಿಸಿದರು.