ಉಳ್ಳಾಲ, ಫೆ 05 (DaijiworldNews/MS): "ಅಕ್ಷರ ಸಂತ" ಎಂದು ಖ್ಯಾತರಾಗಿರುವ ಪದ್ಮಶ್ರೀ ಪುರಸ್ಕೃತ ಕಿತ್ತಳೆ ಹಣ್ಣು ವ್ಯಾಪಾರಿ ಹರೇಕಳ ಹಾಜಬ್ಬ ಅವರ ಮನವಿಗೆ ಮೇರೆಗೆ, ಉಳ್ಳಾಲ ತಾಲ್ಲೂಕಿನ ಹರೇಕಳದಲ್ಲಿ ಅವರು ನಿರ್ಮಿಸಿದ್ದ ಪ್ರೌಢಶಾಲೆಯು, ಪದವಿಪೂರ್ವ ಕಾಲೇಜಾಗಿ ಮೇಲ್ದರ್ಜೆಗೇರಲಿದೆ. ಈ ಬಗ್ಗೆ ರಾಜ್ಯ ಸರ್ಕಾರ ಆದೇಶ ನೀಡಿದ್ದು ಮುಂದಿನ ಶೈಕ್ಷಣಿಕ ವರ್ಷದಿಂದಲೇ ಪ.ಪೂ. ಕಾಲೇಜು ಸ್ಥಳೀಯ ವಿದ್ಯಾರ್ಥಿಗಳಿಗೆ ಮಂಜೂರಾಗಲಿದೆ.
ಹರೇಕಳ ಪರಿಸರದಲ್ಲಿ ಪದವಿಪೂರ್ವ ಕಾಲೇಜು ಇಲ್ಲದ ಕಾರಣ ಇಲ್ಲಿನ ವಿದ್ಯಾರ್ಥಿಗಳು ಪದವಿಪೂರ್ವ ವಿದ್ಯಾಭ್ಯಾಸಕ್ಕಾಗಿ ದೂರದ ಪಟ್ಟಣದ ಕಾಲೇಜುಗಳಿಗೆ ಹೋಗಬೇಕಾದ ಸ್ಥಿತಿ ಇದ್ದು, ಇದಕ್ಕಾಗಿ ಪ್ರೌಢ ಶಾಲೆಯನ್ನು ಪದವಿಪೂರ್ವ ಕಾಲೇಜನ್ನಾಗಿ ಉನ್ನತೀಕರಿಸಬೇಕು ಎಂದು ಹರೇಕಳ ಹಾಜಬ್ಬ ಹಲವು ವರ್ಷಗಳಿಂದ ಸರ್ಕಾರಕ್ಕೆ ಮನವಿ ಸಲ್ಲಿಸುತ್ತಾ ಬಂದಿದ್ದರು.
ಇದೀಗ ರಾಜ್ಯಪಾಲರ ಆದೇಶದಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ (ಪದವಿ ಪೂರ್ವ ಶಿಕ್ಷಣ) ಅಧೀನ ಕಾರ್ಯದರ್ಶಿ ಪದ್ಮಿನಿ ರಾವ್ ಹೊರಡಿಸಿರುವ ಆದೇಶ ಪತ್ರ ಹಾಜಬ್ಬ ಅವರ ಕೈ ಸೇರಿದೆ.ಇಲಾಖೆಯಲ್ಲಿ ಈಗಾಗಲೇ ಮಂಜೂರಾಗಿರುವ ಹುದ್ದೆಗಳನ್ನು ಬಳಸಿಕೊಂಡು ಹಾಗೂ ಲಭ್ಯ ಸಂಪನ್ಮೂಲಗಳಿಂದ ವೆಚ್ಚವನ್ನು ಭರಿಸುವ ಷರತ್ತಿಗೆ ಒಳಪಟ್ಟು ಪಿ.ಯು. ಕಾಲೇಜು ಆರಂಭಿಸುವುದಕ್ಕೆ ಮಂಜೂರಾತಿ ನೀಡಿದೆ.
ಹರೇಕಳ ಹಾಜಬ್ಬ ಮಂಗಳೂರಿನಲ್ಲಿ ಕಿತ್ತಳೆ ಹಣ್ಣು ಮಾರಾಟ ಮಾಡಿ ಹಣ ಉಳಿಸಿ ತಮ್ಮ ಊರಿನಲ್ಲಿ ಶಾಲೆಯನ್ನು ಕಟ್ಟಿಸಿದ್ದರು. ಅವರ ಶಿಕ್ಷಣ ಪ್ರೀತಿಯನ್ನು ಗುರುತಿಸಿದ ಕೇಂದ್ರ ಸರ್ಕಾರ ಅವರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು.